googlebfaab40290066a19.html ETAGI DESIGN COLLABORATIVE: "ಮನೆಯೆಲ್ಲೋ ಹೃದಯವೂ ಅಲ್ಲೇ ಇರುತ್ತದೆ "

Tuesday 9 April 2013

"ಮನೆಯೆಲ್ಲೋ ಹೃದಯವೂ ಅಲ್ಲೇ ಇರುತ್ತದೆ "


"ಮನೆಯೆಲ್ಲೋ ಹೃದಯವೂ ಇರುತ್ತದೆ"-ಎಂಬ ಅನಿಸಿಕೆ ಮನೆ ಕಟ್ಟಿಸುವ ಅನೇಕರ ಅನುಭವಕ್ಕೆ ನಿಲುಕುತ್ತದೆ. ಕಟ್ಟಡ ನಿರ್ಮಾಣ ವೃತ್ತಿ ನಿಪುಣರನ್ನು ಭೇಟಿಯಾಗಿ ಸಲಹೆ ತೆಗೆದುಕೊಳ್ಳುವುದರಿಂದ, ಮನೆಯೆಂಬ ಕಟ್ಟಡಕ್ಕೊಂದು ವೈಶಿಷ್ಟ್ಯ ಲಭಿಸುತ್ತದೆ ಎನ್ನುತ್ತಾರೆ ಆರ್ಕಿಟೆಕ್ಟ್ ಪ್ರಶಾಂತ್ ನಂದಿಪ್ರಸಾದ್.   

ಹದಿನೈದು ವರ್ಷಗಳ ಹಿಂದಿನ ಕಟ್ಟಡಗಳ ಸಾಲಿನಲ್ಲಿ ಹೊಸದಾಗಿ ನಿರ್ಮಿತವಾಗುತ್ತಿರುವ ಕಟ್ಟಡಗಳನ್ನು ಗಮನಿಸಿದಾಗ, ವಿನ್ಯಾಸಗಾರರ ನೈಪುಣ್ಯತೆಯನ್ನು ಕಾಣಬಹುದಾಗಿರುತ್ತದೆ; ಅವುಗಳಲ್ಲೂ ಕೆಲವು ಕಟ್ಟಡಗಳು ಮಾತ್ರ ತಮ್ಮ ವೈಶಿಷ್ಟ್ಯದಿಂದ ನೋಡುಗರನ್ನು ಕ್ಷಣಕಾಲ ನೋಡುತ್ತಲೇ ಇರುವಂತೇ ಆಕರ್ಷಿಸುತ್ತವೆ. "ಕಕ್ಷಿದಾರನ ಮನದಮೂಸೆಯಲ್ಲಿ ಉದ್ಭವಿಸುವ ಭಾವನೆಗಳಿಗೆ ವಿನ್ಯಾಸಗಳ ಮೂಲಕ ರೂಪುಗೊಡುವಾತ ಆರ್ಕಿಟೆಕ್ಟ್ ಅಥವಾ ವಿನ್ಯಾಸಗಾರನಾಗುತ್ತಾನೆ."

ಮನೆ ಕಟ್ಟುವವರು ವಿನ್ಯಾಸ ಸಲಹೆಗಳಿಗಾಗಿ ವಿನ್ಯಾಸಗಾರನನ್ನು ಭೇಟಿಮಾಡಿದಾಗ, ಮನೆಕಟ್ಟುವಾಗ ಜನರು ಮೊದಲು ಯಾವ ಕನಸುಗಳನ್ನು ಕಾಣತೊಡಗುತ್ತಾರೆ? ಮತ್ತು ಕಟ್ಟಡ ಎನ್ನುವುದು ಮನೆ ಎನ್ನಿಸಿಕೊಳ್ಳುವುದು ಯಾವಾಗ? ಎಂಬೀರೀತಿಯ ಹಲವು ಪ್ರಶ್ನೆಗಳ ಮೇಲೆ ವಿನ್ಯಾಸಗಾರ ಚಿಂತಿಸಬೇಕಾಗುತ್ತದೆ. ನಿರ್ಮಿತಿಯ ಖರ್ಚುವೆಚ್ಚಗಳ ಮುಂಗಡಪತ್ರದ ಗಣನೆಯ ಹೊರತಾಗಿ, ಮಾಲೀಕನಾಗುವವನ ಮನದಲ್ಲೇನಿದೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಖುಲ್ಲಾಜಾಗದ ಲಭ್ಯತೆ, ಮಾಲೀಕರಾಗುವವರ ಇಷ್ಟಾನಿಷ್ಟಗಳು, ಪತಿ-ಪತ್ನಿಯರಲ್ಲಿ ಯಾರ್ಯಾರು ಏನೇನನ್ನು ಬಯಸುತ್ತಿದ್ದಾರೆ[ಕೆಲವೊಮ್ಮೆ ಪತಿಯ ಬಯಕೆಗಳು ಪತ್ನಿಗೆ ಇಷ್ಟವಾಗದೇ ಹೋಗಬಹುದು!]ಎಂಬ ಅಂಶ, ನಿರ್ದಿಷ್ಟ ದೃಷ್ಟಿಕೋನಗಳು, ಕುಟುಂಬದ ಮಿಕ್ಕುಳಿದ ಸದಸ್ಯರ ತರಾವರಿ ಅಭಿಪ್ರಾಯಗಳು, ಆಪ್ತ ಮಿತ್ರ-ಬಂಧು-ಬಳಗದ ಅಭಿಪ್ರಾಯಗಳು ಇವೆಲ್ಲವುಗಳನ್ನೂ ಒಟ್ಟಂದದಲ್ಲಿ ಮೇಳೈಸಿ, ವಿಶಿಷ್ಟವಾಗಿ ವಿನ್ಯಾಸಮಾಡಿಕೊಡುವುದು ವಿನ್ಯಾಸಗಾರನ ಜವಾಬ್ದಾರಿ. ಹೀಗೇ ಒಂದೇ ಕಟ್ಟಡಕ್ಕೆ ಸಂಬಂಧಿಸಿದಂತೇ ಒಬ್ಬ ಕಕ್ಷಿದಾರನ ಪರವಾಗಿ, ಹಲವು ಮುಖಗಳಿಂದ ಬರುವ ಅಭಿಪ್ರಾಯಗಳನ್ನು ಸಂಗ್ರಹಿಸುವಾಗ, ವಿನ್ಯಾಸಗಾರನಿಗೆ ಅತಿಯಾದ ತಾಳ್ಮೆಯ ಅವಶ್ಯಕತೆಯಿರುತ್ತದೆ; ಮತ್ತು ಆ ವಿಷಯದಲ್ಲಿ ಆತ ನುರಿತ ವ್ಯಕ್ತಿಯಾಗಿರಬೇಕಾಗಿರುತ್ತದೆ.   

ಕೆಲವೊಮ್ಮೆ ಕಕ್ಷಿದಾರರಿಗೆ ತಾವು ತಮ್ಮ ಮನೆಯಲ್ಲಿ ಏನೆಲ್ಲಾ ಇರಬೇಕು ಮತ್ತು ಹೇಗೆ ಹೇಗೆ ಇರಬೇಕೆಂಬುದನ್ನು ವಿವರಿಸಿ ಹೇಳಲು ಸಾಧ್ಯವಾಗುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ, ಕಕ್ಷಿದಾರ ಏನು ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ಅರ್ಥೈಸಿಕೊಳ್ಳುವುದು ಒಂದು ನೈಜ ಕಲೆಯಾಗಿರುತ್ತದೆ. ಕಕ್ಷಿದಾರರ ಮನದಲ್ಲಿಯ ಅನುಚ್ಚರಿತ ಭಾವಸೂಕ್ಷ್ಮಗಳನ್ನು  ದಕ್ಷ ವಿನ್ಯಾಸಗಾರ ಓದಿಕೊಳ್ಳಬಲ್ಲ! ಮತ್ತು "ನೀವು ಹೀಗೆ ಹೇಳಲು ಯತ್ನಿಸುತ್ತಿದ್ದೀರಿ ಅಲ್ಲವೇ?" ಎಂಬ ಪ್ರಶ್ನೆಯೊಂದಿಗೆ ಕಕ್ಷಿದಾರರು ನಡೆಸಬೇಕಾದ ಸಂವಹನ ಪ್ರಕ್ರಿಯೆಗೆ ಸಹಾಯಕನಾಗಬಲ್ಲ. ವಿನ್ಯಾಸಗೊಳಿಸುವ ಹಂತದಲ್ಲಿ ಆ ಎಲ್ಲಾ ಅಮೂರ್ತರೂಪದ ಬೇಡಿಕೆಗಳನ್ನೂ ಒತ್ತಟ್ಟಿಗೆ-ಸಂಗಾತಿಯೆಂಬಂತೇ ಮನದಲ್ಲೇ ಇಟ್ಟುಕೊಂಡು, ನಿಗದಿತ ಖರ್ಚುವೆಚ್ಚಗಳ ಪರಿಮಿತಿಯಲ್ಲಿ, ಕಕ್ಷಿದಾರನ ಮನಸ್ಸಿಗೆ ಸಂತಸವಾಗುವಂತೇ ವಿನ್ಯಾಸಗೊಳಿಸಿಕೊಡುವುದು ವಿನ್ಯಾಸಗಾರನ ಅನಿವಾರ್ಯತೆ. ಅದಕ್ಕೇ ಹೇಳುತ್ತೇವೆ:"ಕಕ್ಷಿದಾರನ ಮನದಮೂಸೆಯಲ್ಲಿ ಉದ್ಭವಿಸುವ ಭಾವನೆಗಳಿಗೆ ವಿನ್ಯಾಸಗಳ ಮೂಲಕ ರೂಪುಗೊಡುವಾತ ಆರ್ಕಿಟೆಕ್ಟ್ ಅಥವಾ ವಿನ್ಯಾಸಗಾರನಾಗುತ್ತಾನೆ." 

ಒಂದು ಯೋಜನೆ[ಪ್ರಾಜೆಕ್ಟ್]ಯನ್ನು ಕೈಗೆತ್ತಿಕೊಂಡಾಗ, ಕೆಲವು ರೂಪುರೇಷೆಗಳ/ಶೈಲಿಗಳ ಕುರಿತು ವಿನ್ಯಾಸಗಾರನಿಗೂ ಅವನದ್ದೇ ಆದ ಧೋರಣೆಗಳು, ಇಷ್ಟಾನಿಷ್ಟಗಳು ಇರುತ್ತವೆ. ಹಲವು ವರ್ಷಗಳ ತನ್ನ ಅನುಭವದ ಮೂಸೆಯಲ್ಲಿಂದ ವಿಶಿಷ್ಟ ಗುಣಾತ್ಮಕ ಅಂಶಗಳನ್ನು ಹೊರತೆಗೆದು, ಅದನ್ನಾತ ಬಳಸಿಕೊಳ್ಳುವುದರಿಂದ ನವನವ ವಿನ್ಯಾಸ ರೂಪುಗೊಳ್ಳುತ್ತದೆ. ನಿರ್ಮಾಣವಾಗಿ ನಿಂತ ಕಟ್ಟಡ ನೋಡುಗರೊಡನೆ ತನ್ನದೇ ಆದ ಮೂಕಭಾಷೆಯಲ್ಲಿ ಸಂವಹಿಸುತ್ತದೆ! ಕಕ್ಷಿದಾರನಿಗೆ ಯೋಜನೆ ರೂಪಿಸಿಕೊಡುವ ಕೆಲಸವನ್ನು ವಹಿಸಿಕೊಂಡ ಆ ಕ್ಷಣದಿಂದಲೇ, ಇಂಥಾದ್ದೊಂದು ಕಟ್ಟಡ ಹೀಗೇ ಬರಬೇಕೆಂಬ ಮೂರ್ತರೂಪದ ಪರಿಕಲ್ಪನೆ ವಿನ್ಯಾಸಗಾರನ ಮನದಲ್ಲಿ ಮೂಡಿರುತ್ತದೆ ಎಂಬುದನ್ನು ಗಮನಿಸಬೇಕು.    

ತಮ್ಮಿಂದಲೇ ಮಾಡಿಕೊಳ್ಳಲಾಗದ ವಿನ್ಯಾಸ ಸಲಹೆಗಳನ್ನು ಪಡೆದುಕೊಳ್ಳುವುದಕ್ಕೋಸ್ಕರ ನಿಯೋಜಿಸಿಕೊಂಡ ವಿನ್ಯಾಸಗಾರನನ್ನು ಕಕ್ಷಿದಾರರು ನಂಬುವ ಮತ್ತು ಗೌರವಿಸುವ ಸ್ವಭಾವವನ್ನು ಹೊಂದಿರಬೇಕಾಗುತ್ತದೆ. ನಿಯೋಜಿತ ವಿನ್ಯಾಸಗಳಲ್ಲಿ ನಡೆಯಬೇಕಾದ ಮೌಲ್ಯವರ್ಧನೆ ಹಲವು ಮಜಲುಗಳಲ್ಲಿ ನಡೆಯುವುದರಿಂದ, ತಾವು ಕೊಟ್ಟ ಶುಲ್ಕಕ್ಕಿಂತಾ ಹೆಚ್ಚಿನ ಮೌಲ್ಯ ವಿನ್ಯಾಸಗಾರನ ಕೆಲಸಕ್ಕಿದೆ ಎಂಬುದನ್ನು ಅವರು ಮನಗಾಣಬೇಕು. ವಿನ್ಯಾಸವನ್ನು ಚಿತ್ರಿಸುವುದರ ಜೊತೆಗೆ, ಕಟ್ಟಡ ಸಂಬಂಧೀ ಕಾನೂನುಬದ್ಧ ಬಾಡಿಗೆಯ ಅಥವಾ ಭೋಗ್ಯದ ಕರಾರುಪತ್ರಗಳನ್ನು ಓದುವುದು, ಆ ಕುರಿತು ಸಲಹೆ ನೀಡುವುದು, ಕಟ್ಟಡಗಳ ಕುರಿತಾದ ಸಾಲಸೌಲಭ್ಯಕ್ಕಾಗಿ ಖರ್ಚುವೆಚ್ಚಗಳ ಮುಂಗಡಪತ್ರವನ್ನು ತಯಾರಿಸಿಕೊಡುವುದು, ಅಂತಿಮವಾಗಿ ಒಪ್ಪಿತವಾದ ವಿನ್ಯಾಸವನ್ನವಲಂಬಿಸಿ ಕಟ್ಟಡಗಳ ಪರಿಪೂರ್ಣ ನಕ್ಷೆ ತಯಾರಿಸಿಕೊಡುವುದು, ಮಿಕ್ಕುಳಿದ ಅಭಿಯಂತರರ ಜೊತೆಗೆ ಸಹಕರಿಸಿ-ಕಟ್ಟಡದ ವಿವಿಧ ವಿಭಾಗಗಳಲ್ಲಿನ ಭಾರ ಸಮತೋಲನ ಮಾಪನ ನಡೆಸುವುದು, ಕಟ್ಟಡ ಕಾಮಗಾರಿಯ ಮುನ್ನೋಟ ಮತ್ತು ಸಾಂದರ್ಭಿಕ ಪರಿಶೀಲನೆ, ಉತ್ತಮವಾಗಿ ಕಟ್ಟುವ ವಿಧಾನಗಳಲ್ಲಿ ಕೆಲಸಗಳ ಪೂರ್ಣಗೊಳಿಸುವಿಕೆಗೆ ಸಲಹೆ, ಕಟ್ಟಡಗಳ ಒಳಾಂಗಣ ವಿನ್ಯಾಸ, ಅಲ್ಲಿನ ಪೀಠೋಪಕರಣಗಳ ವಿನ್ಯಾಸ-ತನ್ಮೂಲಕ ಕಟ್ಟಡದ ಮಿಕ್ಕುಳಿದ ವಿನ್ಯಾಸಗಳಿಗೆ ಅವು ತಾದಾತ್ಮ್ಯವಾಗಿ ಹೊಂದಾಣಿಕೆಯಾಗುವಂತೇ ಅವುಗಳ ಬಣ್ಣ, ಆಕಾರ, ಚಹರೆ, ಮತ್ತು ಕಟ್ಟಡದ ದೀಪಗಳ ವಿನ್ಯಾಸ, ಗೋಡೆಯ ಬಣ್ಣಗಳ ವಿನ್ಯಾಸ --ಹೀಗೇ ಹಲವು ಮಜಲುಗಳಲ್ಲಿ ವಿನ್ಯಾಸಗಾರ ಕೆಲಸ ನಿರ್ವಹಿಸಿ, ಕಟ್ಟಡವೊಂದು ವಿಶಿಷ್ಟ ಕಲಾತ್ಮಕ ಕಟ್ಟಡವಾಗಿ ಪರಿಪೂರ್ಣಗೊಳ್ಳಲು ಕಾರಣನಾಗುತ್ತಾನೆ.

ಬಹಳಸರ್ತಿ, ಉತ್ತಮ ಜಾಗವನ್ನು ನಿರ್ಮಿಸುವ ವೇಳೆಯಲ್ಲಿ, ಕಾರ್ಯಗತಗೊಳ್ಳುವ ನಿರ್ಧಾರಗಳು ಕಟ್ಟಡದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಕಕ್ಷಿದಾರರಿಗೆ ಗೊತ್ತಾಗುವುದೇ ಇಲ್ಲ. ಮುಂಬರುವ ದಿನಗಳಲ್ಲಿ ಆಗಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಕಟ್ಟಡದ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೇ, ಕಟ್ಟಡಕ್ಕೆ ಬಳಸುವ ಸಾಮಗ್ರಿ, ಸಾಮಗ್ರಿಗಳ ತಾಳಿಕೆ-ಬಾಳಿಕೆ, ಕಟ್ಟಡಗಳ ಬಾಳಿಕೆ-ನಂತರದ ವರ್ಷಗಳಲ್ಲಿ ಅವುಗಳ ವಿಸ್ತರಣೆ ಮೊದಲಾದ ವಿಷಯಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುವ ಕೆಲಸವನ್ನು, ತಾನು ಪಡೆದ ತರಬೇತಿ ಮತ್ತು ಸ್ವಾನುಭವದಿಂದ ವಿನ್ಯಾಸಗಾರನೇ ನಡೆಸಿಕೊಡಬಹುದಾಗಿರುತ್ತದೆ. ವಿನ್ಯಾಸಗಳ ವಿವಿಧ ಹಂತಗಳಲ್ಲಿ ವಿನ್ಯಾಸಗಾರ ಕಕ್ಷಿದಾರನಿಗೆ ಪೂರಕ ಮಾಹಿತಿಗಳನ್ನೊದಗಿಸಿಕೊಡುವ ಮೂಲಕ ಮನೆ/ಕಟ್ಟಡ ಹೇಗಿರಬೇಕೆಂಬುದನ್ನು ತಿಳಿಸಿಕೊಡುತ್ತಾನೆ. ತನ್ನ ಮೂಲನಕ್ಷೆ ಮತ್ತು ಚಿತ್ರಗಳಿಂದ ಕಕ್ಷಿದಾರನಿಗೆ ಕಟ್ಟಡದ ಬಗ್ಗಿರುವ ತನ್ನ ನೋಟವನ್ನು ಮನವರಿಕೆ ಮಾಡಿಕೊಡುವುದು ವಿನ್ಯಾಸಗಾರನ ಕೆಲಸವಾದರೆ, ಪಡೆದ ಮಾಹಿತಿಗಳ ಮೂಲಕ, ನೋಡಿದ ನಕ್ಷೆಗಳ ಮೂಲಕ ವಿನ್ಯಾಸ ಒಪ್ಪಿತವೇ-ತನ್ನ ಮನದಿಚ್ಛೆಯಂತೇ ಬಂದಿದೆಯೇ ಎಂಬುದನ್ನು ಹೇಳುವುದು ಕಕ್ಷಿದಾರನ ಜವಾಬ್ದಾರಿಯಾಗಿರುತ್ತದೆ. ಹಿಂದಕ್ಕೂ ಮುಂದಕ್ಕೂ ಮಾರ್ಪಾಡುಗಳನ್ನು ಮಾಡುತ್ತಾ/ಪಡೆಯುತ್ತಾ ಮುಗಿಸುವ ವಿನ್ಯಾಸದ ಈ ವಿಧಾನವನ್ನು ’ಡಿಸೈನ್ ಡೆವಲಪ್ ಮೆಂಟ್’ ಅಥವಾ ’ವಿನ್ಯಾಸ ಪರಿಷ್ಕರಣೆ’ ಎಂದು ವೃತ್ತಿಮಾತಿನಲ್ಲಿ ಹೇಳುತ್ತಾರೆ. ವೃತ್ತಿ ನೈಪುಣ್ಯವನ್ನು ಬೇಡುವ ಪ್ರಾಡಕ್ಟ್ ಡಿಸೈನ್, ಇಂಟೀರಿಯರ್ ಡಿಸೈನ್, ಲ್ಯಾಂಡ್ ಸ್ಕೇಪ್ ಡಿಸೈನ್, ಫರ್ನಿಚರ್ ಡಿಸೈನ್ ಮೊದಲಾದವುಗಳೆಲ್ಲಾ ಸಹನೆಯಿಂದಲೂ ಮತ್ತು ಹೆಚ್ಚಿನ ನಿಗಾ ವಹಿಸಿಯೂ ಮಾಡಬೇಕಾದ ಕೆಲಸಗಳಾದರೂ, ದೀರ್ಘಕಾಲ ವಿನ್ಯಾಸಗಾರನಿಗೂ ಮತ್ತು ಕಕ್ಷಿದಾರನಿಗೂ ಖ್ಯಾತಿಯನ್ನು ತಂದುಕೊಡುವ ಅನುಭವಗಳಾಗಿರುತ್ತವೆ.

ಹಲವು ವರ್ಷಗಳ ಹಿಂದೆ ತನ್ನ ಕೃಷಿಭೂಮಿಯಲ್ಲಿ ಮನೆ ಕಟ್ಟಿಸುವಾಗ, "ಪ್ರವೇಶಿಸುತ್ತಿದ್ದಂತೆಯೇ ನನ್ನ ಮನೆ ನನ್ನನ್ನು ಅಪ್ಪಿಕೊಳ್ಳಬೇಕು"[My house should hug me when I walk in…”] ಎಂಬ ಮಾತನ್ನು ನನ್ನ ಮಾವ ಅವರಮನೆಯ ವಿನ್ಯಾಸಗಾರನಲ್ಲಿ ಹೇಳಿದ್ದರು. ವಿಕಸಿತ ಮನದ ಕಕ್ಷಿದಾರರು ತಮ್ಮ ವಿನ್ಯಾಸಗಾರರಲ್ಲಿ ಹೇಳುವ ಇಂತಹ ಮಾತಿಗೆ ಅಂತಹ ಕಕ್ಷಿದಾರರನ್ನು ಯಾರೇ ಆದರೂ  ಶ್ಲಾಘಿಸಬಹುದು. ಈಗಲೂ ಆ ಕಟ್ಟಡವನ್ನು ನೋಡಿದರೆ, ವಿನ್ಯಾಸಗಾರ ಹೇಗೆ ಆ ಮಾತನ್ನು ಕಟ್ಟಡವನ್ನಾಗಿ ಪರಿವರ್ತಿಸಿದ ಎಂದು ತಿಳಿಯಬಹುದು!

ಅಂದಹಾಗೇ ಆರ್ಕಿಟೆಕ್ಟ್ ಪ್ರಶಾಂತ್ ನಂದಿಪ್ರಸಾದ್ ಅವರನ್ನು ಈ ಮೂಲಕ ಸಂಪರ್ಕಿಸಬಹುದು : +91 9886124035 / wip.code@gmail.com